ಅಮೆರಿಕದಿಂದಾಗಿ ಮತ್ತೆ ಹಾರ್ಮುಜ್ ಜಲಸಂಧಿ ಮುಚ್ಚಿದ ಇರಾನ್
ಹಾರ್ಮುಜ್ ಜಲಸಂಧಿಯಲ್ಲಿ ಇರಾನ್ ಮತ್ತೆ ನಿರ್ಬಂಧಗಳನ್ನು ವಿಧಿಸಿದೆ. ಅಮೆರಿಕ ಕದನ ವಿರಾಮ ಉಲ್ಲಂಘಿಸಿದೆ ಎಂದು ಆರೋಪಿಸಿರುವ ಇರಾನ್ ಹಾರ್ಮುಜ್ ಜಲಸಂಧಿಯನ್ನು ಮುಚ್ಚಿದೆ. ನಿನ್ನೆ ಎಲ್ಲ ದೇಶಗಳ ಕಮರ್ಷಿಯಲ್ ಹಡಗುಗಳ ಸಂಚಾರಕ್ಕೆ ಹಾರ್ಮುಜ್ ಜಲಸಂಧಿಯನ್ನು ತೆರೆಯಲಾಗಿದೆ ಎಂದು ಇರಾನ್ ಘೋಷಿಸಿತ್ತು. ಅದಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಧನ್ಯವಾದಗಳನ್ನು ಕೂಡ ತಿಳಿಸಿದ್ದರು. ಆದರೆ, ಇಂದು ಮತ್ತೆ ಇರಾನ್ ತನ್ನ ನಿರ್ಧಾರವನ್ನು ಬದಲಾಯಿಸಿದೆ. ಇದರಿಂದಾಗಿ ಮತ್ತೆ ವಿವಿಧ ದೇಶಗಳ ತೈಲ ಸಾಗಾಟ ಮಾಡುವ ಹಡಗುಗಳ ಸಂಚಾರಕ್ಕೆ ತೊಂದರೆ ಉಂಟಾಗಿದೆ.
ಇರಾನ್ ಸಂಬಂಧಿತ ಹಡಗು ಸಾಗಣೆಯ ಮೇಲಿನ ದಿಗ್ಬಂಧನವನ್ನು ಕೊನೆಗೊಳಿಸುವುದಿಲ್ಲ ಎಂದು ಅಮೆರಿಕ ಹೇಳಿದ ನಂತರ ಇರಾನ್ ಮತ್ತೆ ಹಾರ್ಮುಜ್ ಜಲಸಂಧಿಯ ಮೇಲೆ ನಿರ್ಬಂಧ ಹೇರಿದೆ. ಇರಾನ್ ಬಂದರುಗಳ ಮೇಲಿನ ಅಮೆರಿಕದ ದಿಗ್ಬಂಧನ ಜಾರಿಯಲ್ಲಿರುವವರೆಗೆ ಹಾರ್ಮುಜ್ ಜಲಸಂಧಿಯ ಮೂಲಕ ಹಡಗುಗಳ ಸಾಗಾಟವನ್ನು ನಿರ್ಬಂಧಿಸುವುದಾಗಿ ಇರಾನ್ ಎಚ್ಚರಿಸಿದೆ.
ಇಸ್ರೇಲ್ ಮತ್ತು ಇರಾನ್ ಬೆಂಬಲಿತ ಹೆಜ್ಬೊಲ್ಲಾ ಉಗ್ರಗಾಮಿ ಗುಂಪಿನ ನಡುವೆ ಲೆಬನಾನ್‌ನಲ್ಲಿ 10 ದಿನಗಳ ಕದನ ವಿರಾಮದ ನಂತರ ಹಾರ್ಮುಜ್ ಜಲಸಂಧಿಯನ್ನು ವಾಣಿಜ್ಯ ಹಡಗುಗಳಿಗೆ ಸಂಪೂರ್ಣವಾಗಿ ತೆರೆಯಲಾಗಿದೆ ಎಂದು ಇರಾನ್ ನಿನ್ನೆ ಹೇಳಿತ್ತು. ಆದರೂ ಇರಾನ್ನ ಹಡಗುಗಳ ಮೇಲಿನ ದಿಗ್ಬಂಧನ ಮುಂದುವರಿಯುತ್ತದೆ ಎಂದು ಟ್ರಂಪ್ ಪುನರುಚ್ಚರಿಸಿದ ನಂತರ ಇರಾನ್ ಅಧಿಕಾರಿಗಳು ಈ ಕ್ರಮವು ಕಳೆದ ವಾರದ ಕದನ ವಿರಾಮ ಒಪ್ಪಂದವನ್ನು ಉಲ್ಲಂಘಿಸಿದೆ ಎಂದು ಆರೋಪಿಸಿದ್ದಾರೆ. ಹೀಗಾಗಿ ಹಾರ್ಮುಜ್ ಜಲಸಂಧಿಯನ್ನು ತೆರೆಯುವುದಿಲ್ಲ ಎಂದು ಎಚ್ಚರಿಸಿದ್ದಾರೆ.