ಬೆಳಗಾವಿಯಲ್ಲಿ ಸಿಲಿಂಡರ್, ಇಂಧನ ಕೊರತೆ ಇಲ್ಲ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್
ಬೆಳಗಾವಿ: ‘ನಗರವೂ ಸೇರಿದಂತೆ ಜಿಲ್ಲೆಯಾದ್ಯಂತ ಗೃಹಬಳಕೆ ಎಲ್‌ಪಿಜಿ ಸಿಲಿಂಡರ್, ಪೆಟ್ರೋಲ್ ಮತ್ತು ಡೀಸೆಲ್ ಕೊರತೆ ಇಲ್ಲ. ದೈನಂದಿನ ಬಳಕೆಗೆ ಅನುಗುಣವಾಗಿ ನಮ್ಮಲ್ಲಿ ಪೂರೈಕೆ ವ್ಯವಸ್ಥೆ ಇದೆ. ಸಾರ್ವಜನಿಕರು ಯಾವ ಕಾರಣಕ್ಕೂ ವಿಚಲಿತರಾಗಬಾರದು’ ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಕೋರಿದರು. ಇಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಜಿಲ್ಲೆಗೆ ನಿತ್ಯ 25 ಸಾವಿರ ಗೃಹಬಳಕೆ ಎಲ್‌ಪಿಜಿ ಸಿಲಿಂಡರ್‌ಗಳ ಅಗತ್ಯವಿದೆ. ಈಗ ನಮಗೆ ದಿನಕ್ಕೆ 20 ಸಾವಿರದಿಂದ 22 ಸಾವಿರ ಸಿಲಿಂಡರ್ ಪೂರೈಕೆಯಾಗುತ್ತಿವೆ. ಮುಂಬರುವ ದಿನಗಳಲ್ಲಿ ಪರಿಸ್ಥಿತಿ ಸುಧಾರಿಸುವ ನಿರೀಕ್ಷೆ ಇದೆ. ಜನರು ಆತಂಕಕ್ಕೆ ಒಳಗಾಗಿ ತರಾತುರಿಯಲ್ಲಿ ಬುಕಿಂಗ್ ಮಾಡಬಾರದು’ ಎಂದರು.
‘ಬೆಳಗಾವಿಯಲ್ಲಿ 35 ಸಾವಿರ ಪಿಎನ್‌ಜಿ ಸಂಪರ್ಕಗಳಿವೆ. ಗ್ರಾಹಕರು ವಿವೇಚನೆಯಿಂದ ಲಭ್ಯ ಇಂಧನ ಬಳಸಬೇಕು. ಶೇ 60ಕ್ಕೆ ಬಳಕೆ ಪ್ರಮಾಣ ಸೀಮಿತಗೊಳಿಸಬೇಕು’ ಎಂದು ಕೋರಿದರು.
‘ಜಿಲ್ಲೆಗೆ ದಿನಕ್ಕೆ 1,600 ವಾಣಿಜ್ಯ ಸಿಲಿಂಡರ್ ಬೇಕಿದ್ದು, 600 ಸಿಲಿಂಡರ್ ಲಭ್ಯವಾಗುತ್ತಿವೆ. ಹೋಟೆಲ್ ಮಾಲೀಕರ ಸಂಘ, ತೈಲ ಕಂಪನಿಗಳ ಪ್ರತಿನಿಧಿಗಳ ಸಭೆ ನಡೆಸಿ, ಬೇಡಿಕೆಯಷ್ಟು ಸಿಲಿಂಡರ್ ಲಭ್ಯವಾಗುವಂತೆ ಮಾಡಿದ್ದೇವೆ. ವಾಣಿಜ್ಯ ಉದ್ದೇಶಕ್ಕಾಗಿ ಬಳಸುತ್ತಿದ್ದ 42 ಗೃಹಬಳಕೆ ಸಿಲಿಂಡರ್ ವಶಕ್ಕೆ ಪಡೆದಿದ್ದೇವೆ’ ಎಂದರು. ‘ಬೆಳಗಾವಿ ಜಿಲ್ಲೆಯಲ್ಲಿ ಪೆಟ್ರೋಲ್, ಡೀಸೆಲ್ ಕೊರತೆ ಇಲ್ಲ. ಜಿಲ್ಲೆಯಲ್ಲಿ 560 ಅದರಲ್ಲೂ ಬೆಳಗಾವಿ ನಗರದಲ್ಲಿ 50 ಪೆಟ್ರೋಲ್ ಬಂಕ್‌ಗಳಿವೆ. ಮೂರು ಡಿಪೋಗಳಿಂದ ಅವುಗಳಿಗೆ ಇಂಧನ ಪೂರೈಕೆಯಾಗುತ್ತಿದೆ. ನಗರದ ಬಂಕ್‌ಗಳಲ್ಲಿ ಇಂಧನ ಖಾಲಿಯಾದರೆ, ಐದು ತಾಸಿನಲ್ಲಿ ಪೂರೈಕೆಯಾಗುವ ವ್ಯವಸ್ಥೆ ಇದೆ’ ಎಂದು ತಿಳಿಸಿದರು.
‘ಇಂಧನ ಪೂರೈಕೆ ಕಂಪೆನಿಗಳು, ಬಂಕ್‌ಗಳ ಮಾಲೀಕರೊಂದಿಗೆ ಚರ್ಚಿಸಲಾಗಿದ್ದು, ಎಲ್ಲಿಯೂ ಇಂಧನ ಕೊರತೆ ಕಂಡುಬಂದಿಲ್ಲ’ ಎಂದು ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದರು.
‘ಮನೆಯಲ್ಲಿ ಹೆಚ್ಚುವರಿಯಾಗಿ ಪೆಟ್ರೋಲ್, ಡೀಸೆಲ್ ಸಂಗ್ರಹಿಸಿ ಇರಿಸಲು ಅವಕಾಶವಿಲ್ಲ. ಇದು ಅಪಾಯಕಾರಿ ಕೂಡ. ಯಾರೂ ಇಂಥದ್ದಕ್ಕೆ ಅವಕಾಶ ಕೊಡಬಾರದು’ ಎಂದರು.
ನಗರ ಪೊಲೀಸ್ ಕಮಿಷನರ್ ಭೂಷಣ ಬೊರಸೆ, ‘ನಗರದಲ್ಲಿ ಅಡುಗೆ ಅನಿಲ ಮತ್ತು ಇಂಧನದ ಕೊರತೆ ಇಲ್ಲ. ಯಾವುದೇ ಬಂಕ್‌ಗಳಲ್ಲಿ ಬಾಟಲಿ ಅಥವಾ ಕ್ಯಾನ್‌ಗಳಲ್ಲಿ ಇಂಧನ ಮಾರಾಟಕ್ಕೆ ಅವಕಾಶ ನೀಡುವುದಿಲ್ಲ. ಅಕ್ರಮವಾಗಿ ಇಂಧನ ಸಂಗ್ರಹ ಮತ್ತು ಮಾರಾಟ ತಡೆಯಲು ಕ್ರಮ ವಹಿಸಲಾಗುವುದು’ ಎಂದು ತಿಳಿಸಿದರು.
‘ಸಾಮಾಜಿಕ ಜಾಲತಾಣದಲ್ಲಿ ವದಂತಿ ಹರಡುವವರ ವಿರುದ್ಧ ಕ್ರಮ ಜರುಗಿಸಲಾಗುವುದು. ಯಾವುದೇ ಅಕ್ರಮ ಅಥವಾ ಗಲಾಟೆ ಕಂಡುಬಂದರೆ ಸಹಾಯವಾಣಿ 112ಕ್ಕೆ ಕರೆ ಮಾಡಿ ಪೊಲೀಸರಿಗೆ ಮಾಹಿತಿ ನೀಡಬೇಕು’ ಎಂದು ಕೋರಿದರು.
ಆಹಾರ ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕ ಮಲ್ಲಿಕಾರ್ಜುನ, ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಅಜಯ್ ಪೈ ಇದ್ದರು.