Asiya Andrabi: ಕಾಶ್ಮೀರಿ ಪ್ರತ್ಯೇಕತಾವಾದಿ ನಾಯಕಿ ಆಸಿಯಾ ಅಂದ್ರಾಬಿಗೆ ಜೀವಾವಧಿ ಶಿಕ್ಷೆ
ನವದೆಹಲಿ: ಭಯೋತ್ಪಾದನಾ ಚಟುವಟಿಕೆ ಮತ್ತು ದೇಶವಿರೋಧಿ ಸಂಚು ರೂಪಿಸಿದ ಆರೋಪದ ಮೇಲೆ ಕಾಶ್ಮೀರದ ಪ್ರತ್ಯೇಕತಾವಾದಿ ನಾಯಕಿ, ‘ದುಖ್ತರನ್-ಎ-ಮಿಲ್ಲತ್’ (DeM) ಸಂಘಟನೆಯ ಮುಖ್ಯಸ್ಥೆ ಆಸಿಯಾ ಅಂದ್ರಾಬಿಗೆ ದೆಹಲಿಯ ವಿಶೇಷ ನ್ಯಾಯಾಲಯವು ಮಂಗಳವಾರ (ಮಾರ್ಚ್ 24) ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ಇದೇ ಪ್ರಕರಣದಲ್ಲಿ ಅಂದ್ರಾಬಿಯ ಆಪ್ತ ಸಹಚರರಾದ ಸೋಫಿ ಫೆಹ್ಮೀದಾ ಮತ್ತು ನಹೀದಾ ನಸ್ರೀನ್ ಅವರಿಗೆ ನ್ಯಾಯಾಲಯವು ತಲಾ 30 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿದೆ.
ದೆಹಲಿಯ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶರಾದ ಚಂದರ್ ಜಿತ್ ಸಿಂಗ್ ಅವರು ಈ ಮಹತ್ವದ ತೀರ್ಪು ಪ್ರಕಟಿಸಿದ್ದಾರೆ.
ಭಾರತದ ಸಾರ್ವಭೌಮತ್ವಕ್ಕೆ ಧಕ್ಕೆ ತರಲು ಸಂಚು ರೂಪಿಸಿದ್ದು, ಪಾಕಿಸ್ತಾನ ಮೂಲದ ಉಗ್ರ ಸಂಘಟನೆಗಳೊಂದಿಗೆ ನಂಟು ಹೊಂದಿದ್ದ ಆರೋಪ ಇವರ ಮೇಲಿತ್ತು.
ಅದರಂತೆ 2018ರಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಇವರನ್ನು ಬಂಧಿಸಿತ್ತು. ಸಮಾಜದಲ್ಲಿ ದ್ವೇಷ ಹರಡುವುದು ಮತ್ತು ಕಾಶ್ಮೀರವನ್ನು ಭಾರತದಿಂದ ಪ್ರತ್ಯೇಕಿಸಲು ಜನರನ್ನು ಪ್ರಚೋದಿಸುತ್ತಿದ್ದ ಬಗ್ಗೆ ಸಾಕ್ಷ್ಯಗಳನ್ನು ಒದಗಿಸಲಾಗಿತ್ತು. ಇರದ ಮುಂದುವರೆದ ಭಾಗವಾಗಿ ಇದೇ ವರ್ಷದ ಜನವರಿ 14 ರಂದು ನ್ಯಾಯಾಲಯವು ಇವರನ್ನು ದೋಷಿ ಎಂದು ಘೋಷಿಸಿತ್ತು. ಇದು 1987 ರಲ್ಲಿ ಕಾಶ್ಮೀರದಲ್ಲಿ ಸ್ಥಾಪನೆಯಾದ ಮಹಿಳೆಯರ ಪ್ರತ್ಯೇಕತಾವಾದಿ ಸಂಘಟನೆಯಾಗಿದೆ. ಆಸಿಯಾ ಅಂದ್ರಾಬಿ ಇದರ ನೇತೃತ್ವ ವಹಿಸಿದ್ದರು. ದೇಶವಿರೋಧಿ ಚಟುವಟಿಕೆಗಳ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಈ ಸಂಘಟನೆಯನ್ನು 2004 ರಲ್ಲಿಯೇ ನಿಷೇಧಿಸಿತ್ತು.
ಕಾಶ್ಮೀರದಲ್ಲಿ ಪ್ರತ್ಯೇಕತಾವಾದ ಮತ್ತು ಭಯೋತ್ಪಾದಕ ಜಾಲಗಳ ವಿರುದ್ಧ ಭಾರತೀಯ ತನಿಖಾ ಸಂಸ್ಥೆಗಳು ನಡೆಸುತ್ತಿರುವ ಬೃಹತ್ ಕಾರ್ಯಾಚರಣೆಯ ಭಾಗವಾಗಿ ಈ ಮಹತ್ವದ ತೀರ್ಪು ಹೊರಬಿದ್ದಿದೆ.