ಗಂಗಾ ನದಿಯಲ್ಲಿ ಇಫ್ತಾರ್ ಕೂಟ: 14 ಮುಸ್ಲಿಂ ಯುವಕರ ಬಂಧನಕ್ಕೆ ಓವೈಸಿ ಆಕ್ರೋಶ
ವಾರಣಾಸಿ: ಕಾಶಿ ವಿಶ್ವನಾಥನ ನಗರಿ ವಾರಣಾಸಿಯ ಗಂಗಾನದಿಯ ದೋಣಿಯಲ್ಲಿ ಕುಳಿತು ಇಫ್ತಾರ್ ಕೂಟ ನಡೆಸಿದ ಆರೋಪದ ಮೇಲೆ 14 ಮುಸ್ಲಿಂ ಯುವಕರನ್ನು ಬಂಧಿಸಿರುವ ಉತ್ತರ ಪ್ರದೇಶ ಪೊಲೀಸರ ಕ್ರಮವನ್ನು ಸಂಸದ ಅಸಾದುದ್ದೀನ್ ಓವೈಸಿ ಪ್ರಶ್ನಿಸಿದ್ದಾರೆ.
ಸುದ್ದಿ ಸಂಸ್ಥೆ ಎಎನ್ಐ ಜೊತೆ ಮಾತನಾಡಿದ ಓವೈಸಿ, "ದೋಣಿಯಲ್ಲಿ ಆಹಾರ ಸೇವಿಸುವುದರಿಂದ ಯಾರ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗುತ್ತದೆ?, ಆದರೆ ಗಂಗಾ ನದಿಗೆ ಪ್ರತಿದಿನ ಲಕ್ಷಾಂತರ ಲೀಟರ್ ಕೊಳಚೆ ನೀರು ಸೇರುತ್ತಿದೆ, ಅದು ನಿಮ್ಮ ಭಾವನೆಗಳಿಗೆ ನೋವುಂಟು ಮಾಡುವುದಿಲ್ಲವೇ? ಆದರೆ ಮುಸ್ಲಿಂ ಯುವಕರು ದೋಣಿಯಲ್ಲಿ ಆಹಾರ ಸೇವಿಸಿದರೆ ಮಾತ್ರ ಭಾವನೆಗಳಿಗೆ ಧಕ್ಕೆಯಾಗುತ್ತದೆಯೇ?" ಎಂದು ಅವರು ಪ್ರಶ್ನಿಸಿದ್ದಾರೆ.
ಇದೇ ವೇಳೆ ಮದ್ಯದ ಅಂಗಡಿಗಳ ಉದಾಹರಣೆ ನೀಡಿದ ಅವರು, ರಂಜಾನ್ ತಿಂಗಳಿನಲ್ಲಿ ಮದ್ಯದ ಅಂಗಡಿಗಳು ತೆರೆದಿರುವುದು ಮುಸ್ಲಿಮರ ಭಾವನೆಗಳಿಗೆ ಧಕ್ಕೆಯಾಗುವುದಿಲ್ಲವೇ ಎಂದು ಮರುಪ್ರಶ್ನೆ ಹಾಕಿದರು. ನದಿಯಲ್ಲಿ ಆಹಾರ ಸೇವಿಸುವುದು ಯಾವ ಕಾನೂನಿನ ಅಡಿಯಲ್ಲಿ ಅಪರಾಧವಾಗುತ್ತದೆ ಎಂದು ಓವೈಸಿ ಸರ್ಕಾರವನ್ನು ಕೇಳಿದ್ದಾರೆ. ಕೇವಲ ಓವೈಸಿ ಮಾತ್ರವಲ್ಲದೆ, ಸಮಾಜವಾದಿ ಪಕ್ಷದ ನಾಯಕರು ಮತ್ತು ಇತರ ವಿರೋಧ ಪಕ್ಷದ ನಾಯಕರು ಸಹ ಈ ಬಂಧನವನ್ನು "ಚುನಾವಣಾ ರಾಜಕಾರಣ" ಮತ್ತು "ಕೋಮು ವಿಭಜನೆ" ಎಂದು ಕರೆದಿದ್ದಾರೆ. ಇತ್ತ ಬಿಜೆಪಿ ಬೆಂಬಲಿತ ಸಂಘಟನೆಗಳು "ಗಂಗೆಯ ಪವಿತ್ರತೆಯನ್ನು ಕಾಪಾಡುವುದು ನಮ್ಮ ಕರ್ತವ್ಯ" ಎಂದು ಬಂಧನವನ್ನು ಸಮರ್ಥಿಸಿಕೊಂಡಿವೆ.
ಕಳೆದ ವಾರ ವಾರಣಾಸಿಯ ಗಂಗಾನದಿಯಲ್ಲಿ ಚಲಿಸುತ್ತಿದ್ದ ದೋಣಿಯೊಂದರಲ್ಲಿ ಕೆಲವು ಯುವಕರು ಚಿಕನ್ ಬಿರಿಯಾನಿ ಸೇವಿಸಿ ಇಫ್ತಾರ್ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಅಲ್ಲದೆ ಅವರು ಮಾಂಸಾಹಾರದ ಎಲುಬುಗಳನ್ನು ನದಿಗೆ ಎಸೆದಿದ್ದಾರೆ ಎಂದು ಆರೋಪಿಸಿ ಹಿಂದೂ ಪರ ಸಂಘಟನೆಗಳು ದೂರು ನೀಡಿದ್ದವು. ಈ ಹಿನ್ನೆಲೆಯಲ್ಲಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದ ಮೇಲೆ ಉತ್ತರ ಪ್ರದೇಶ ಪೊಲೀಸರು 14 ಮಂದಿಯನ್ನು ಬಂಧಿಸಿದ್ದರು.