ರಷ್ಯಾ- ಉಕ್ರೇನ್ ಯುದ್ಧದಲ್ಲಿ ಸೋತಿದ್ದು ನ್ಯಾಟೋ!
ಉಕ್ರೇನ್ ಮೇಲೆ ರಷ್ಯಾ ಆಕ್ರಮಣ ಮಾಡಿ ಮೂರು ವರ್ಷಗಳು ಕಳೆದಿವೆ. ಇಂದಿಗೂ ಜಗತ್ತು ಆ ಯುದ್ಧದ ಸಾವು-ನೋವುಗಳ ಲೆಕ್ಕಾಚಾರ, ಕದನ ವಿರಾಮದ ಕುರಿತು ಚರ್ಚಿಸುತ್ತಿದೆ. ಈ ಚರ್ಚೆಗಳು ಮುಖ್ಯವಾಗಿದ್ದರೂ, ಒಂದು ಪ್ರಮುಖ ವಿಷಯವನ್ನು ಮರೆಮಾಚುತ್ತಿವೆ. ರಷ್ಯಾ ಕೇವಲ ಉಕ್ರೇನಿಯನ್ ಭೂಮಿಯನ್ನು ಹತೋಟಿಗೆ ತೆಗೆದುಕೊಳ್ಳಲು ಹೋರಾಡುತ್ತಿರಲಿಲ್ಲ. ರಷ್ಯಾಕ್ಕೆ ಅದಕ್ಕಿಂತಲೂ ಗಹನವಾದ ಉದ್ದೇಶವೊಂದಿತ್ತು- ಅದು ‘ನ್ಯಾಟೋ’ ಎಂಬ ಮಿಲಿಟರಿ ಒಕ್ಕೂಟದ ವಿಶ್ವಾಸಾರ್ಹತೆಯನ್ನು ನಾಶಪಡಿಸುವುದು. ಈ ಗುರಿಯನ್ನು ಅಳೆದು ನೋಡಿದರೆ, ರಷ್ಯಾ ಈಗ ಗೆದ್ದಿದೆ. ಈ ಜಯ ಪೂರ್ವ ಉಕ್ರೇನಿನ ರಣರಂಗದಲ್ಲಿ ಸಿಕ್ಕಿದ್ದಲ್ಲ; ಬದಲಿಗೆ ವಾಷಿಂಗ್ಟನ್ ಮತ್ತು ಬ್ರಸೆಲ್ಸ್‌ನ ಕಾರಿಡಾರ್‌ಗಳಲ್ಲಿ ಹಾಗೂ ಐರೋಪ್ಯ ಒಕ್ಕೂಟದ ಒಡೆದ ಮನಸ್ಸುಗಳಲ್ಲಿ ಮೂಡಿಬಂದಿದೆ.