ಕೇರಳದಲ್ಲಿ ಬದಲಾವಣೆಗೆ ಜನ ಸನ್ನದ್ಧ: ಯುಡಿಎಫ್ ಪರ ರಾಹುಲ್ ಗಾಂಧಿ ಬ್ಯಾಟಿಂಗ್!
ತಿರುವನಂತಪುರಂ: "ಕೇರಳದ ಜನತೆ ಈಗ ಬದಲಾವಣೆಯನ್ನು ಬಯಸುತ್ತಿದ್ದಾರೆ. ರಾಜ್ಯದಲ್ಲಿ ಯುಡಿಎಫ್ (UDF) ನೇತೃತ್ವದ ಸರ್ಕಾರ ರಚನೆಯಾಗುವುದು ನಿಶ್ಚಿತ" ಎಂದು ಕಾಂಗ್ರೆಸ್ ನಾಯಕ ಹಾಗೂ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಶುಕ್ರವಾರ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
'ಟೀಮ್ ಯುಡಿಎಫ್ ಎಂದರೆ ಟೀಮ್ ಕೇರಳಂ'
ಈ ಕುರಿತು 'ಎಕ್ಸ್' ನಲ್ಲಿ ಪೋಸ್ಟ್ ಮಾಡಿರುವ ಅವರು,"ನಮ್ಮ ತಂಡವು ಅನುಭವಿ ನಾಯಕರು ಮತ್ತು ಯುವ ಬದಲಾವಣೆಗಾರರ ಅದ್ಭುತ ತಂಡವಾಗಿದೆ. ಪ್ರತಿಯೊಬ್ಬ ಅಭ್ಯರ್ಥಿಯೂ ಕೇರಳದ ಜನರ ಧ್ವನಿ ಮತ್ತು ಆಕಾಂಕ್ಷೆಗಳನ್ನು ಪ್ರತಿಬಿಂಬಿಸುತ್ತಾರೆ.
ಇವರೆಲ್ಲರೂ ತಮ್ಮ ಕ್ಷೇತ್ರದ ನಾಡಿಮಿಡಿತ ಅರಿತಿರುವ ಸಮರ್ಥ ನಾಯಕರು" ಎಂದು ಶ್ಲಾಘಿಸಿದ್ದಾರೆ.
ಕೇರಳ ನನ್ನ ಮನೆ, ಜನರು ನನ್ನ ಕುಟುಂಬ
ಕೇರಳದೊಂದಿಗಿನ ತಮ್ಮ ಒಡನಾಟವನ್ನು ಸ್ಮರಿಸಿದ ಮಾಜಿ ವಯನಾಡು ಸಂಸದರು, "ನನಗೆ ಕೇರಳ ಎಂದರೆ ಒಂದು ಮನೆ ಇದ್ದಂತೆ. ಇಲ್ಲಿನ ಜನರು ನನಗೆ ತೋರಿರುವ ಪ್ರೀತಿ ಮತ್ತು ಕಲಿಸಿರುವ ಪಾಠಗಳಿಗೆ ನಾನು ಸದಾ ಋಣಿಯಾಗಿದ್ದೇನೆ. ರಾಜ್ಯದ ಉಜ್ವಲ ಭವಿಷ್ಯಕ್ಕಾಗಿ ನಾನು ಸದಾ ನಿಮ್ಮ ಜೊತೆಗಿರುತ್ತೇನೆ. ಪ್ರಾಮಾಣಿಕವಾಗಿ ಸ್ಪಂದಿಸುವ ಮತ್ತು ಜನರ ಮಾತು ಕೇಳುವ ಸರ್ಕಾರಕ್ಕಾಗಿ ಕೇರಳದ ಜನ ಕಾಯುತ್ತಿದ್ದಾರೆ" ಎಂದು ಭಾವುಕರಾಗಿ ನುಡಿದರು.
92 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ
ಕೇರಳದ 126 ಸದಸ್ಯ ಬಲದ ವಿಧಾನಸಭೆಗೆ ಕಾಂಗ್ರೆಸ್ ಈಗಾಗಲೇ 92 ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಆಡಳಿತಾರೂಢ ಎಲ್‌ಡಿಎಫ್ (LDF) ಅನ್ನು ಎದುರಿಸಲು ಕಾಂಗ್ರೆಸ್ ಈ ಬಾರಿ ತನ್ನ ರಾಜ್ಯ ಮಟ್ಟದ ನಾಯಕರ ಮೇಲೆ ಹೆಚ್ಚಿನ ಭರವಸೆ ಇಟ್ಟಿದೆ. ವಿಶೇಷವೆಂದರೆ, ಯಾವುದೇ ಸಂಸದರನ್ನು ಕಣಕ್ಕಿಳಿಸದೆ ಸ್ಥಳೀಯ ನಾಯಕತ್ವಕ್ಕೆ ಆದ್ಯತೆ ನೀಡಲಾಗಿದೆ. ಉಳಿದ ಸೀಟುಗಳನ್ನು ಯುಡಿಎಫ್ ಮಿತ್ರಪಕ್ಷಗಳಿಗೆ ಮತ್ತು ಪಕ್ಷೇತರರಿಗೆ ಬಿಟ್ಟುಕೊಡಲಾಗಿದೆ.
ಚುನಾವಣಾ ಸಮರ
ಕಳೆದ ಹತ್ತು ವರ್ಷಗಳಿಂದ ಅಧಿಕಾರದಿಂದ ದೂರವಿರುವ ಕಾಂಗ್ರೆಸ್, ಈ ಬಾರಿ ಕೇರಳದಲ್ಲಿ ಕಮ್‌ಬ್ಯಾಕ್ ಮಾಡಲು ಭರ್ಜರಿ ತಯಾರಿ ನಡೆಸಿದೆ. ಏಪ್ರಿಲ್ 9 ರಂದು ಕೇರಳದಲ್ಲಿ ಮತದಾನ ನಡೆಯಲಿದ್ದು, ಮೇ 4 ರಂದು ಫಲಿತಾಂಶ ಹೊರಬೀಳಲಿದೆ.