'ನಮ್ಮದು ತಟಸ್ಥ ನೀತಿ..' ಅಮೆರಿಕ ಫೈಟರ್ ಜೆಟ್‌ಗೆ ಲ್ಯಾಂಡಿಂಗ್ ಪರ್ಮಿಷನ್ ನಿರಾಕರಿಸಿದ ಶ್ರೀಲಂಕಾ!
ಕೊಲೊಂಬೊ (ಮಾ.20): ಮಧ್ಯಪ್ರಾಚ್ಯದಲ್ಲಿ ಅಮೆರಿಕಾ ಮತ್ತು ಇರಾನ್ ನಡುವೆ ಭೀಕರ ಯುದ್ಧ ನಡೆಯುತ್ತಿರುವ ಬೆನ್ನಲ್ಲೇ, ದ್ವೀಪ ರಾಷ್ಟ್ರ ಶ್ರೀಲಂಕಾ ಅತ್ಯಂತ ಧೈರ್ಯದ ನಿರ್ಧಾರವೊಂದನ್ನು ತೆಗೆದುಕೊಂಡಿದೆ. ತನ್ನ ನೆಲವನ್ನು ಯುದ್ಧಕ್ಕೆ ಬಳಸಿಕೊಳ್ಳಲು ಅಮೆರಿಕಾಗೆ ಅನುಮತಿ ನಿರಾಕರಿಸುವ ಮೂಲಕ ಶ್ರೀಲಂಕಾ ತನ್ನ ತಟಸ್ಥ ನೀತಿಯನ್ನು ಜಗತ್ತಿಗೆ ಸಾರಿದೆ. ಶುಕ್ರವಾರ ಶ್ರೀಲಂಕಾ ಸಂಸತ್ತಿನಲ್ಲಿ ಈ ವಿಷಯವನ್ನು ಘೋಷಿಸಿದ ಅಧ್ಯಕ್ಷ ಅನುರಾ ಕುಮಾರ ದಿಸಾನಾಯಕೆ, ಅಮೆರಿಕಾ ಎರಡು ಬಾರಿ ಮಾಡಿದ್ದ ವಿನಂತಿಯನ್ನು ತಾವು ತಿರಸ್ಕರಿಸಿರುವುದಾಗಿ ತಿಳಿಸಿದರು.
ಜಿಬೌಟಿ ಮೂಲದಿಂದ ಆಗಮಿಸಬೇಕಿದ್ದ ಅಮೆರಿಕಾದ ಎರಡು ಅತ್ಯಾಧುನಿಕ ಯುದ್ಧ ವಿಮಾನಗಳನ್ನು ಶ್ರೀಲಂಕಾದ ಆಗ್ನೇಯ ಭಾಗದ ಮಟ್ಟಾಲ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಮಾಡಲು ಅಮೆರಿಕಾ ಅನುಮತಿ ಕೋರಿತ್ತು. ಮಾರ್ಚ್ 4 ಮತ್ತು ಮಾರ್ಚ್ 8 ರಂದು ಬಂದಿದ್ದ ಈ ಮನವಿಗಳನ್ನು ಶ್ರೀಲಂಕಾ ಸರ್ಕಾರ ತಿರಸ್ಕರಿಸಿದೆ.
"ನಮ್ಮ ಮೇಲೆ ಎಷ್ಟೇ ಒತ್ತಡಗಳಿದ್ದರೂ ನಾವು ತಟಸ್ಥರಾಗಿ ಉಳಿಯಲು ಬಯಸುತ್ತೇವೆ. ನಾವು ಯಾರಿಗೂ ಮಣಿಯುವುದಿಲ್ಲ. ಮಧ್ಯಪ್ರಾಚ್ಯದ ಯುದ್ಧವು ಸವಾಲುಗಳನ್ನು ತಂದೊಡ್ಡಬಹುದು, ಆದರೆ ನಮ್ಮ ನಿಲುವಿನಲ್ಲಿ ಬದಲಾವಣೆ ಇಲ್ಲ," ಎಂದು ಅಧ್ಯಕ್ಷರು ಸಂಸತ್ತಿನಲ್ಲಿ ಹೇಳಿದ್ದಾರೆ.
ಇನ್ನು ಶ್ರೀಲಂಕಾ ಈ ನಿರ್ಧಾರ ಮಾಡಿರುವುದರ ಹಿಂದೆ ಕಾರಣವೂ ಇದೆ. ಮಾರ್ಚ್ 4 ರಂದು ಅಮೆರಿಕಾದ ಜಲಾಂತರ್ಗಾಮಿ ನೌಕೆಯು ಶ್ರೀಲಂಕಾದ ದಕ್ಷಿಣ ಕರಾವಳಿಯಿಂದ 80 ಕಿ.ಮೀ ದೂರದ ಅಂತರಾಷ್ಟ್ರೀಯ ಜಲಪ್ರದೇಶದಲ್ಲಿ ಇರಾನ್‌ನ ಯುದ್ಧನೌಕೆ 'ಐರಿಸ್ ಡೇನಾ' (IRIS Dena) ಮೇಲೆ ಟಾರ್ಪಿಡೊ ದಾಳಿ ನಡೆಸಿತ್ತು. ಭಾರತದ ವಿಶಾಖಪಟ್ಟಣಂನಲ್ಲಿ ನಡೆದ ನೌಕಾಪಡೆಯ ಸಮೀಕ್ಷಾ ಅಭ್ಯಾಸ ಮುಗಿಸಿ ಮರಳುತ್ತಿದ್ದ ಈ ಹಡಗಿನ ಮೇಲೆ ನಡೆದ ದಾಳಿಯಲ್ಲಿ 87 ನೌಕಾಪಡೆಯ ಸೈನಿಕರು ಮೃತಪಟ್ಟಿದ್ದರು.
ಆಗ ಶ್ರೀಲಂಕಾ ಮಾನವೀಯತೆಯ ಆಧಾರದ ಮೇಲೆ ತಕ್ಷಣವೇ ಸ್ಪಂದಿಸಿತ್ತು. ಶ್ರೀಲಂಕಾ ನೌಕಾಪಡೆ ಮತ್ತು ವಾಯುಪಡೆ ಬೃಹತ್ ಕಾರ್ಯಾಚರಣೆ ನಡೆಸಿ, 32 ಗಾಯಾಳು ಇರಾನಿ ಸೈನಿಕರನ್ನು ರಕ್ಷಿಸಿ ಗಾಲೆ ನಗರದಲ್ಲಿ ಚಿಕಿತ್ಸೆ ಕೊಡಿಸಿತ್ತು. ಅಷ್ಟೇ ಅಲ್ಲದೆ, ಮೃತಪಟ್ಟ 87 ಸೈನಿಕರ ದೇಹಗಳನ್ನು ಅತ್ಯಂತ ಗೌರವಪೂರ್ವಕವಾಗಿ ಇರಾನ್‌ಗೆ ಕಳುಹಿಸಿಕೊಟ್ಟಿತ್ತು.