ಲಿಖಿತ ಪ್ರಶ್ನೆಗಳಿಗೆ ಉತ್ತರಿಸಲು ಸಚಿವರು ವಿಫಲ: ವಿವರಣೆ ನೀಡಲು ಸಿ.ಎಂ ಸೂಚನೆ
ಬೆಂಗಳೂರು: ಸದನದ ವೇಳೆ ಶಾಸಕರ ಲಿಖಿತ ಪ್ರಶ್ನೆಗಳಿಗೆ ಉತ್ತರಿಸಲು ಸಚಿವರು ವಿಫಲರಾದ ಕುರಿತು ತಕ್ಷಣ ವಿವರಣೆ ನೀಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿದ್ದಾರೆ. ಸದನದಲ್ಲಿ ಉತ್ತರ ಮಂಡಿಸಲು ವಿಫಲರಾದ ಸಚಿವರು, ಅಧಿಕಾರಿಗಳ ನಡೆಯ ವಿರುದ್ಧ ಅಸಮಾಧಾನಗೊಂಡ ಸಭಾಧ್ಯಕ್ಷ ಯು.ಟಿ. ಖಾದರ್, ಸಭಾತ್ಯಾಗ ಮಾಡಿದ ಘಟನೆಯು ವಿಧಾನಸಭೆಯಲ್ಲಿ ಸೋಮವಾರ ನಡೆದಿತ್ತು.
ಅದರ ನಂತರ ಸಚಿವರು ಮತ್ತು ಅಧಿಕಾರಿಗಳಿಗೆ ನಡವಳಿ ಕಳುಹಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ‘ತಮ್ಮ ಇಲಾಖೆಗೆ ಸಂಬಂಧಿಸಿದಂತೆ ಸದನದಲ್ಲಿ ಉತ್ತರಿಸಲು ಬಾಕಿ ಇರುವ ಪ್ರಶ್ನೆಗಳಿಗೆ ಉತ್ತರಗಳನ್ನು ಇದುವರೆಗೂ ಕಳುಹಿಸದೇ ಇರುವುದು ವಿಧಾನಸಭಾ ಸದಸ್ಯರುಗಳು ಸದನದಲ್ಲಿ ಚರ್ಚಿಸಲು ಅನಾನುಕೂಲತೆಯನ್ನು ಉಂಟು ಮಾಡಿರುತ್ತದೆ.
ಇದು ಸರ್ಕಾರಕ್ಕೆ ತೀವ್ರ ಮುಜುಗರ ಉಂಟು ಮಾಡುವುದರೊಂದಿಗೆ ಶಾಸಕರುಗಳ ಹಕ್ಕಿಗೆ ಮತ್ತು ಸದನದ ಘನತೆಗೆ ಚ್ಯುತಿಯನ್ನುಂಟು ಮಾಡಿರುತ್ತದೆ. ಈ ಸಂಬಂಧ ಇಂದು ನಡೆದ ಸಭೆಯಲ್ಲಿ ಮಾನ್ಯ ಸಭಾಧ್ಯಕ್ಷರು ತೀವ್ರ ಅಸಮಾಧಾನ ವ್ಯಕ್ತಪಡಿಸಿರುತ್ತಾರೆ. ತಮ್ಮ ಇಲಾಖೆಯ ವತಿಯಿಂದ ಉತ್ತರಿಸಬೇಕಾದ ಪ್ರಶ್ನೆಗಳಿಗೆ ಉತ್ತರವನ್ನು ಸಕಾಲದಲ್ಲಿ ವಿಧಾನಮಂಡಲಕ್ಕೆ ಕಳುಹಿಸದೇ ಇರುವ ಬಗ್ಗೆ ಇಲಾಖಾ ಕಾರ್ಯದರ್ಶಿಗಳ ವಿವರಣೆಯನ್ನು ತಕ್ಷಣ ನೀಡಲು ಸೂಚಿಸಲಾಗಿದೆ. ಅಲ್ಲದೆ, ಉತ್ತರ ಕಳುಹಿಸದ ಸಂದರ್ಭದಲ್ಲಿ ಸಂಬಂಧಪಟ್ಟ ಶಾಸಕರಿಗೆ ಪ್ರತ್ಯೇಕ ಪತ್ರವನ್ನು ಕಳುಹಿಸಿ ಹಾಗೂ ಮಾಹಿತಿ ಒದಗಿಸುವ ನಿರ್ಧಿಷ್ಟ ಸಮಯವನ್ನು ತಿಳಿಸಲು ಸಹ ಸೂಚಿಸಿದೆ’ ಎಂದು ತಿಳಿಸಿದ್ದಾರೆ.
ಪ್ರಶ್ನೋತ್ತರ ಕಲಾಪದ ಬಳಿಕ ಲಿಖಿತ ರೂಪದಲ್ಲಿರುವ ಉತ್ತರಗಳನ್ನು ಮಂಡಿಸಿದ ಗೃಹ ಸಚಿವ ಜಿ. ಪರಮೇಶ್ವರ, ‘230 ಪ್ರಶ್ನೆಗಳ ಪೈಕಿ 84 ಪ್ರಶ್ನೆಗಳಿಗೆ ಉತ್ತರ ಮಂಡಿಸಲಾಗಿದೆ’ ಎಂದಿದ್ದರು. ಅದಕ್ಕೆ ವಿರೋಧ ಪಕ್ಷದ ನಾಯಕರು ಆಕ್ಷೇಪ ವ್ಯಕ್ತಪಡಿಸಿದ್ದರು. ಅದರ ನಂತರ, ಸಭಾಧ್ಯಕ್ಷ ಯು.ಟಿ. ಖಾದರ್ ಅವರು ಸಭಾತ್ಯಾಗ ಮಾಡಿದ್ದರು.