ಮಗಳು ಅಂತರ್ಜಾತಿ ವಿವಾಹವಾದಳೆಂದು ತಂದೆಯನ್ನು ಕೆಲಸದಿಂದ ಅಮಾನತುಗೊಳಿಸಿದ ದೇವಸ್ಥಾನ ಸಮಿತಿ!
ಕಣ್ಣೂರು: ಮಗಳು ಬೇರೆ ಜಾತಿಯ ಯುವಕನನ್ನು ಮದುವೆಯಾಗಿದ್ದಕ್ಕಾಗಿ ತಮ್ಮನ್ನು ಕೆಲಸದಿಂದ ಅಮಾನತುಗೊಳಿಸಲಾಗಿದೆ ಎಂದು ಕಣ್ಣೂರಿನ ಮುಚಿಲೋಟ್ ಭಗವತಿ ದೇವಸ್ಥಾನದ ಉಪಕರ್ಮಿ (ಪೂಜಾ ಸಹಾಯಕ) ಸಿ ವಿ ರಾಜನ್ ಆರೋಪಿಸಿದ್ದಾರೆ. ಕಳೆದ 30 ವರ್ಷಗಳಿಂದ ಮಲಬಾರ್ ದೇವಸ್ವಂ ಮಂಡಳಿ ವ್ಯಾಪ್ತಿಗೆ ಒಳಪಡುವ ಈ ದೇವಸ್ಥಾನದಲ್ಲಿ ರಾಜನ್ ಸೇವೆ ಸಲ್ಲಿಸುತ್ತಿದ್ದರು.
ವಾಣಿ ಸಮುದಾಯಕ್ಕೆ ಸೇರಿದ ರಾಜನ್ ಅವರ ಮಗಳು ಮಾರ್ಚ್ 15, 2026 ರಂದು ಪೊದುವಾಲ್ ಸಮುದಾಯದ ಯುವಕನನ್ನು ವಿವಾಹವಾಗಿದ್ದರು. ಆಗಸ್ಟ್ 2025 ರಲ್ಲಿ ನಡೆದ ನಿಶ್ಚಿತಾರ್ಥದ ಸಮಯದಲ್ಲೇ ದೇವಸ್ಥಾನದ ಕಮಿಟಿ ತಮ್ಮನ್ನು ಕೆಲಸದಿಂದ ದೂರವಿರಲು ತಿಳಿಸಿತ್ತು. ಆದರೆ ದೇವಸ್ವಂ ಮಂಡಳಿಯ ಸಹಾಯಕ ಕಮಿಷನರ್ ಅವರ ಮಧ್ಯಸ್ಥಿಕೆಯಿಂದ ತಮಗೆ ಕೆಲಸ ಮುಂದುವರಿಸಲು ಅವಕಾಶ ಸಿಕ್ಕಿತ್ತು ಎಂದು ರಾಜನ್ ತಿಳಿಸಿದ್ದಾರೆ.
ಈಗ ನೀಡಲಾಗಿರುವ ಅಮಾನತು ಆದೇಶದಲ್ಲಿ, ರಾಜನ್ ಅವರು ಕಮಿಟಿ ಸದಸ್ಯರು ಮತ್ತು ಭಕ್ತರೊಂದಿಗೆ ಕೆಟ್ಟದಾಗಿ ನಡೆದುಕೊಂಡಿದ್ದಾರೆ ಹಾಗೂ ಪೂರ್ವಜರಿಂದ ಬಂದ ಸಾಂಪ್ರದಾಯಿಕ ಆಚಾರ-ವಿಚಾರಗಳನ್ನು ಉಲ್ಲಂಘಿಸಿದ್ದಾರೆ ಎಂದು ಉಲ್ಲೇಖಿಸಲಾಗಿದೆ. ಆದರೆ, ತಮ್ಮ ವಿರುದ್ಧ ಬಂದಿರುವ ದೂರುಗಳಿಗೆ ಸೂಕ್ತ ಸಾಕ್ಷ್ಯ ಒದಗಿಸಲು ಸಮಿತಿಗೆ ಸಾಧ್ಯವಾಗಿಲ್ಲ ಮತ್ತು ಮಗಳ ಅಂತರ್ಜಾತಿ ವಿವಾಹವೇ ಈ ಕ್ರಮಕ್ಕೆ ಪ್ರಮುಖ ಕಾರಣ ಎಂದು ರಾಜನ್ ಆರೋಪಿಸಿದ್ದಾರೆ. ತಮ್ಮ ತಪ್ಪಿಗೆ ಸೂಕ್ತ ಆಧಾರ ನೀಡಿದರೆ ಕೆಲಸ ತೊರೆಯಲು ಸಿದ್ಧವಿರುವುದಾಗಿ ಅವರು ಹೇಳಿದ್ದಾರೆ.
ಮತ್ತೊಂದೆಡೆ, ದೇವಸ್ಥಾನ ಕಮಿಟಿ ಕಾರ್ಯದರ್ಶಿ ಹರೀಂದ್ರನ್ ಮಾತನಾಡಿ, ರಾಜನ್ ಮುಂದುವರಿಯುವುದಕ್ಕೆ ಕಮಿಟಿಗೆ ಯಾವುದೇ ಅಭ್ಯಂತರವಿಲ್ಲ ಮತ್ತು ವ್ಯವಸ್ಥಾಪಕ ಟ್ರಸ್ಟಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜನ್ ಅವರು ಮಲಬಾರ್ ದೇವಸ್ವಂ ಮಂಡಳಿಯ ಉಪ ಕಮಿಷನರ್, ಮಾನವ ಹಕ್ಕುಗಳ ಆಯೋಗ ಹಾಗೂ ಸ್ಥಳೀಯ ಶಾಸಕ ವಿ ಕುಂಞಿಕೃಷ್ಣನ್ ಅವರಿಗೆ ದೂರು ನೀಡಿದ್ದು, ಮುಂದಿನ ತಿಂಗಳು ದೇವಸ್ವಂ ಮಂಡಳಿಯಲ್ಲಿ ವಿಚಾರಣೆ ನಡೆಯಲಿದೆ ಎಂದು ವರದಿ ತಿಳಿಸಿದೆ.