ಗಣೇಶ ಮೂರ್ತಿ ಮೆರವಣಿಗೆಯ ಮೇಲೆ ಮೊಟ್ಟೆ ಎಸೆತ: ಎಫ್‌ಐಆರ್ ದಾಖಲು
ಮುಂಬೈ: ಇಲ್ಲಿನ ದಕ್ಷಿಣ ಮುಂಬೈನ ಮಾಜ್‌ಗಾವ್ ಪ್ರದೇಶದಲ್ಲಿ ಗಣೇಶ ಚತುರ್ಥಿ ಹಬ್ಬದ ಅಂಗವಾಗಿ ಗಣಪತಿ ಮೂರ್ತಿಯನ್ನು ಮಂಟಪಕ್ಕೆ ತರಲಾಗುತ್ತಿದ್ದ ಮೆರವಣಿಗೆಯ ಮೇಲೆ ಅಪರಿಚಿತರು ಮೊಟ್ಟೆ ಎಸೆದಿರುವ ಘಟನೆ ನಡೆದಿದ್ದು, ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ.
ಮಾಜ್‌ಗಾವ್‌ನ ಮೋರ್ಯಾ ಗಣೇಶೋತ್ಸವ ಮಂಡಳಿಗೆ ಸೇರಿದ ಗಣಪತಿ ಮೂರ್ತಿಯನ್ನು ರವಿವಾರ (ಆ.23) ರಾತ್ರಿ ಮೆರವಣಿಗೆಯ ಮೂಲಕ ಪೆಂಡಾಲ್‌ಗೆ ಕರೆದೊಯ್ಯಲಾಗುತ್ತಿತ್ತು. ಈ ವೇಳೆ ಕಾಂಟಿನೆಂಟಲ್ ಹೈಟ್ಸ್ ಕಟ್ಟಡದಿಂದ ಮೆರವಣಿಗೆಯ ಮೇಲೆ ಮೊಟ್ಟೆಗಳನ್ನು ಎಸೆಯಲಾಗಿದೆ ಎಂದು ಆರೋಪಿಸಲಾಗಿದೆ. ಇದರಲ್ಲಿ ಒಂದು ಮೊಟ್ಟೆ ನೇರವಾಗಿ ಗಣೇಶ ಮೂರ್ತಿಯ ಮೇಲೆಯೇ ಬಿದ್ದಿದ್ದರಿಂದ ಸ್ಥಳದಲ್ಲಿದ್ದ ಭಕ್ತರು ಮತ್ತು ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆಕ್ರೋಶಗೊಂಡ ಜನ ಸಮೂಹ ಘಟನೆ ನಡೆದ ಕಟ್ಟಡದ ಮುಂದೆ ಜಮಾಯಿಸಿ ಪ್ರತಿಭಟನೆ ನಡೆಸಲು ಮುಂದಾಗಿದೆ.