South India's No.1 Digital Mobile Paper
LIVE
Welcome to Smacy Media

ಹಿರಿಯೂರು ಉಪಚುನಾವಣೆ: ಟಿಕೆಟ್‌ಗೆ ಬಿಜೆಪಿ, ಜೆಡಿಎಸ್‌ ಪೈಪೋಟಿ

ಹಿರಿಯೂರು ಉಪಚುನಾವಣೆ: ಟಿಕೆಟ್‌ಗೆ ಬಿಜೆಪಿ, ಜೆಡಿಎಸ್‌ ಪೈಪೋಟಿ

ಬೆಂಗಳೂರು: ಹಿರಿಯೂರು ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಘೋಷಣೆಯಾಗುವ ಮುನ್ನವೇ ಯಾವ ಪಕ್ಷದ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಬೇಕು ಎಂಬ ವಿಚಾರವಾಗಿ ಎನ್‌ಡಿಎಯ ಮಿತ್ರಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್‌ ಮಧ್ಯೆ ಪೈಪೋಟಿ ಶುರುವಾಗಿದೆ.

ಕಾಂಗ್ರೆಸ್‌ ಶಾಸಕರಾಗಿದ್ದ ಡಿ.ಸುಧಾಕರ್ ಅವರ ಅಕಾಲಿಕ ನಿಧನದಿಂದಾಗಿ ಈ ಕ್ಷೇತ್ರ ತೆರವಾಗಿದೆ. ಇಲ್ಲಿ, ಎರಡೂ ಪಕ್ಷದವರು ಒಮ್ಮತದ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಬೇಕು ಎಂದು ಹೇಳುತ್ತಿದ್ದರೂ ತಮ್ಮದೇ ಪಕ್ಷದ ಅಭ್ಯರ್ಥಿಯನ್ನು ಆಯ್ಕೆ ಮಾಡಬೇಕು ಎಂದು ಉಭಯ ಪಕ್ಷದ ನಾಯಕರು ಪಟ್ಟು ಹಿಡಿದಿದ್ದಾರೆ. ‘ಬಿಜೆಪಿ ಅಭ್ಯರ್ಥಿಯನ್ನೇ ಕಣಕ್ಕೆ ಇಳಿಸಬೇಕು’ ಎಂದು ವಿರೋಧ ಪಕ್ಷದ ನಾಯಕ ಆರ್‌.ಅಶೋಕ ಅವರ ಹೇಳಿಕೆಗೆ, ಜೆಡಿಎಸ್‌ನ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

ಬಿಜೆಪಿ ಅಭ್ಯರ್ಥಿಯನ್ನು ಕಣಕ್ಕಿಳಿಸಬೇಕು: ಅಶೋಕ

‘ಹಿರಿಯೂರು ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ಬಿಜೆಪಿ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಬೇಕು ಎಂದು ಪಕ್ಷದ ರಾಜ್ಯ ನಾಯಕರು ತೀರ್ಮಾನಿಸಿದ್ದೇವೆ. ಈ ವಿಚಾರವನ್ನು ವರಿಷ್ಠರಿಗೂ ತಿಳಿಸಿದ್ದೇವೆ’ ಎಂದು ಆರ್‌.ಅಶೋಕ ಹೇಳಿದರು.

ಲೇಖನವು ಕೆಳಗೆ ಮುಂದುವರಿಯುತ್ತದೆ. ಸುದ್ದಿಗಾರರ ಜತೆ ಭಾನುವಾರ ಮಾತನಾಡಿದ ಅವರು ‘ಈ ವಿಚಾರದಲ್ಲಿ ಕುಮಾರಸ್ವಾಮಿ ಅವರ ಮನವೊಲಿಸಲು ನಾನು ಅವರೊಂದಿಗೆ ಮಾತನಾಡುತ್ತೇನೆ’ ಎಂದರು.

‘ಕುಮಾರಸ್ವಾಮಿ ನಮ್ಮ ಮಿತ್ರಪಕ್ಷದವರು. ರಾಜ್ಯದ ನಾಯಕರ ಅಭಿಪ್ರಾಯ ಮತ್ತು ತೀರ್ಮಾನವನ್ನು ‍ಪಕ್ಷದ ವರಿಷ್ಠರಿಗೆ ತಿಳಿಸಿದ್ದೇವೆ. ಅವರು ಜೆಡಿಎಸ್‌ ನಾಯಕರ ಜತೆಗೆ ಮಾತನಾಡಿ ಮನವೊಲಿಸುವ ಕೆಲಸ ಮಾಡುತ್ತಾರೆ. ಅಂತಿಮ ನಿರ್ಧಾರವನ್ನೂ ಅವರೇ ಕೈಗೊಳ್ಳುತ್ತಾರೆ’ ಎಂದರು.

ಪಂಚಾಯಿತಿ ಚುನಾವಣೆಯಲ್ಲಿ ಮೈತ್ರಿ ಮುಂದುವರಿಯುತ್ತದೆಯೇ ಎಂದು ಪ್ರಶ್ನಿಸಿದಾಗ ‘ಇದನ್ನು ಸಹ ವರಿಷ್ಠರೇ ನಿರ್ಧಾರ ಮಾಡುತ್ತಾರೆ. ಆದರೆ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಪರಿಸ್ಥಿತಿ ಒಂದೇ ರೀತಿಯಲ್ಲಿ ಇಲ್ಲ. ಮಂಡ್ಯದಲ್ಲಿ ರಾಜಕೀಯ ಸಮೀಕರಣ ಬೇರೆ ರೀತಿ ಇದ್ದರೆ ಬೆಂಗಳೂರಿನಲ್ಲಿ ಇನ್ನೊಂದು ರೀತಿ ಇದೆ. ಈ ಬಗ್ಗೆ ಎರಡೂ ‍ಪಕ್ಷಗಳ ಜಿಲ್ಲಾಮಟ್ಟದ ನಾಯಕರ ಜತೆಗೆ ಚರ್ಚೆ ನಡೆಸಬೇಕಿದೆ. ಇದಕ್ಕಾಗಿ ಸಮನ್ವಯ ಸಮಿತಿ ರಚಿಸುತ್ತೇವೆ’ ಎಂದು ಉತ್ತರಿಸಿದರು.

ಕ್ಷೇತ್ರದ ಜನರ ಬಯಕೆ ಅರಿತುಕೊಳ್ಳಬೇಕು: ಎಚ್‌ಡಿಕೆ

‘ಹಿರಿಯೂರು ಕ್ಷೇತ್ರದಲ್ಲಿ ಜೆಡಿಎಸ್‌ನ ಅಭ್ಯರ್ಥಿಯನ್ನೇ ಹಾಕಬೇಕು ಎಂಬ ವಿಚಾರದಲ್ಲಿ ನನಗೆ ಯಾವುದೇ ಪ್ರತಿಷ್ಠೆ ಇಲ್ಲ. ಆದರೆ ಅಲ್ಲಿನ ರಾಜಕೀಯ ಪರಿಸ್ಥಿತಿ ಹೇಗಿದೆ ಎಂಬುದನ್ನು ಬಿಜೆಪಿ ನಾಯಕರು ಅರ್ಥಮಾಡಿಕೊಳ್ಳಬೇಕು ಎಂಬುದು ನನ್ನ ಇಚ್ಛೆ’ ಎಂದು ಕೇಂದ್ರ ಸಚಿವರೂ ಆಗಿರುವ ಎಚ್‌.ಡಿ.ಕುಮಾರಸ್ವಾಮಿ ಹೇಳಿದರು.

ರಾಮನಗರದ ಹುಣಸನಹಳ್ಳಿಯಲ್ಲಿ ಸುದ್ದಿಗಾರರ ಜತೆ ಅವರು ಮಾತನಾಡಿದರು. ‘ಜೆಡಿಎಸ್ ಮನವೊಲಿಸುತ್ತೇವೆ’ ಎಂದು ಅಶೋಕ ಅವರ ಹೇಳಿಕೆ ಬಗ್ಗೆ ಪ್ರಶ್ನಿಸಿದಾಗ ‘ಕ್ಷೇತ್ರದಲ್ಲಿ ಜೆಡಿಎಸ್‌ ಅಥವಾ ಬಿಜೆಪಿ ಅಭ್ಯರ್ಥಿ ಸ್ಪರ್ಧಿಸಬೇಕೊ ಎಂಬುದು ಮುಖ್ಯವಾದ ಪ್ರಶ್ನೆಯಲ್ಲ. ಅಲ್ಲಿನ ಜನರ ಅಭಿಪ್ರಾಯ ಮತ್ತು ನಿರೀಕ್ಷೆ ಏನಿದೆ ಎಂಬ ಪ್ರಶ್ನೆ ಮುಖ್ಯವಾಗಬೇಕು. ಅದನ್ನು ಈಡೇರಿಸುವ ಕೆಲಸವಾಗಬೇಕು. ಇದು ಎರಡೂ ಪಕ್ಷಗಳ ಜವಾಬ್ದಾರಿಯಾಗಿದೆ’ ಎಂದರು.

‘ಈ ಚುನಾವಣೆಯನ್ನು ಗೆದ್ದರಷ್ಟೇ ಮುಂದಿನ ಭವಿಷ್ಯ ಏನು ಎಂಬುದು ಸ್ಪಷ್ಟವಾಗಲಿದೆ. ಮೈತ್ರಿ ಕೂಟವು ಮುಂದಿನ ವಿಧಾನಸಭಾ ಚುನಾವಣೆಗೆ ಏನು ಮಾಡಬೇಕು ಎಂಬುದು ಗೊತ್ತಾಗಲಿದೆ. ಈ ಎಲ್ಲ ಅಂಶಗಳನ್ನು ಕುರಿತು ಎರಡೂ ಪಕ್ಷಗಳ ನಾಯಕರು ಚರ್ಚಿಸಬೇಕಿದೆ. ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುತ್ತೇವೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

📍 Davanagere
📰 Prajavani
🕒 8 days ago

Related News

ಸೋನಿಯಾ ಗಾಂಧಿ ಆತ್ಮಕಥೆ ಬಿಡುಗಡೆ ಸಮಾರಂಭಕ್ಕೆ‌ ತಮಿಳುನಾಡು ಮುಖ್ಯಮಂತ್ರಿ ವಿಜಯ್
ಸೋನಿಯಾ ಗಾಂಧಿ ಆತ್ಮಕಥೆ ಬಿಡುಗಡೆ ಸಮಾರಂಭಕ್ಕೆ‌ ತಮಿಳುನಾಡು ಮುಖ್ಯಮಂತ್ರಿ ವಿಜಯ್
ಭಾರತದ ಮುಡಿಗೆ ಏಕದಿನ ಸರಣಿ ಕಿರೀಟ: ಅರ್ಷದೀಪ್, ಸಿರಾಜ್ ‘ಬಿರುಗಾಳಿ’
ಭಾರತದ ಮುಡಿಗೆ ಏಕದಿನ ಸರಣಿ ಕಿರೀಟ: ಅರ್ಷದೀಪ್, ಸಿರಾಜ್ ‘ಬಿರುಗಾಳಿ’
ʼಸರ್ವಾಧಿಕಾರಿʼ ಕಾಂಗ್ರೆಸ್‌ನ ಭಾರತ ಶೃಂಗಸಭೆ ದೇಶ ವಿರೋಧಿ ಸಮಾವೇಶ: ಕೇಂದ್ರ ಸಚಿವ
ʼಸರ್ವಾಧಿಕಾರಿʼ ಕಾಂಗ್ರೆಸ್‌ನ ಭಾರತ ಶೃಂಗಸಭೆ ದೇಶ ವಿರೋಧಿ ಸಮಾವೇಶ: ಕೇಂದ್ರ ಸಚಿವ
⬅ Back
➕ Post Ad
To Ads ➡