ಭಾರತದ ಮುಡಿಗೆ ಏಕದಿನ ಸರಣಿ ಕಿರೀಟ: ಅರ್ಷದೀಪ್, ಸಿರಾಜ್ ‘ಬಿರುಗಾಳಿ’
ಮೌಂಟ್ ಮಾಂಗನೂಯಿ: ಭಾರತದ ಅನನುಭವಿ ವೇಗದ ಬೌಲರ್‌ಗಳು ತಮ್ಮ ತಂಡದ ಅನುಭವಿ ಬ್ಯಾಟರ್‌ಗಳ ವೈಫಲ್ಯವನ್ನು ಮರೆಮಾಚುವಲ್ಲಿ ಯಶಸ್ವಿಯಾದರು. ಇದರ ಫಲವಾಗಿ ಭಾರತ ತಂಡವು ನ್ಯೂಜಿಲೆಂಡ್ ಎದುರಿನ ಏಕದಿನ ಕ್ರಿಕೆಟ್ ಸರಣಿಯನ್ನು 3–1ರಿಂದ ತನ್ನದಾಗಿಸಿಕೊಂಡಿತು.
ಬೇ ಓವಲ್ ಕ್ರೀಡಾಂಗಣದಲ್ಲಿ ಭಾನುವಾರ ಕಿಕ್ಕಿರಿದು ಸೇರಿದ್ದ ಅಭಿಮಾನಿಗಳ ಎದುರು ನಡೆದ ಸರಣಿಯ ಕೊನೆಯ ಹಾಗೂ ಐದನೇ ಪಂದ್ಯದಲ್ಲಿ ಪ್ರವಾಸಿ ಬಳಗವು 22 ರನ್‌ಗಳಿಂದ ಜಯಿಸಲು ವೇಗದ ಬೌಲರ್‌ಗಳ ಕಾಣಿಕೆ ಮಹತ್ವದ್ದಾಗಿತ್ತು.
ಟಾಸ್ ಗೆದ್ದ ನ್ಯೂಜಿಲೆಂಡ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಭಾರತ ತಂಡವು ಮೂರಂಕಿ (4ಕ್ಕೆ86) ಮುಟ್ಟುವ ಮುನ್ನವೇ ಅಗ್ರಕ್ರಮಾಂಕದ ಬ್ಯಾಟರ್‌ಗಳು ತಮ್ಮ ವಿಕೆಟ್‌ಗಳನ್ನು ‘ಬೆಳ್ಳಿ ತಟ್ಟೆ’ಯಲ್ಲಿಟ್ಟು ನ್ಯೂಜಿಲೆಂಡ್‌ಗೆ ಒಪ್ಪಿಸಿದರು. ಇದರಿಂದಾಗಿ 42.1 ಓವರ್‌ಗಳಲ್ಲಿ 209 ರನ್ ಗಳಿಸಿದ ತಂಡವು ಎಲ್ಲ ವಿಕೆಟ್ ಕಳೆದುಕೊಂಡಿತು. ಮಧ್ಯಮ ಕ್ರಮಾಂಕದಲ್ಲಿ ಅಕ್ಷರ್ ಪಟೇಲ್ ಮತ್ತು ಇಶಾನ್ ಕಿಶನ್ ಅವರು ತಲಾ 46 ರನ್ ಗಳಿಸಿ ತಂಡದ ಗೌರವ ಉಳಿಸಿದರು.
ಪಿಚ್ ಕೂಡ ತನ್ನ ರಂಗು ತೋರಿಸಿತು. ಚುರುಕು ಬಿಸಿಲಿನಲ್ಲಿ ಭಾರತದ ಬ್ಯಾಟರ್‌ಗಳು ಆಟ ಆರಂಭಿಸಿದಾಗ ಬ್ಯಾಟರ್‌ಗಳಿಗೆ ಪೂರಕವಾದ ವಾತಾವರಣವೇ ಇತ್ತು. ತಾಪಮಾನ ಕಡಿಮೆಯಾಗುತ್ತ ಗಾಳಿಯಲ್ಲಿ ತೇವ ಹೆಚ್ಚಿದಂತೆ ಶುಷ್ಕ ಅಂಕಣ ಬೌಲರ್‌ಗಳಿಗೆ ನೆರವಾಗತೊಡಗಿತು. ಆತಿಥೇಯರಿಗೆ ಬ್ಯಾಟಿಂಗ್ ಕಷ್ಟವಾಯಿತು.