ಸುರಕ್ಷಿತವಾಗಿ ಇಳಿದ ರಾಕೆಟ್: ಮಸ್ಕ್ ಒಡೆತನದ SpaceXನಿಂದ ಐತಿಹಾಸಿಕ ಸಾಧನೆ
ಸ್ಟಾರ್‌ಬೇಸ್ (ಟೆಕ್ಸಾಸ್): ಸ್ಪೇಸ್‌ಎಕ್ಸ್ ಸಂಸ್ಥೆಯ ಬಾಹ್ಯಾಕಾಶ ನೌಕೆ ಸ್ಟಾರ್‌ಶಿಪ್ ಶನಿವಾರ ಸುರಕ್ಷಿತವಾಗಿ ಇಳಿದಿದೆ.
ಟೆಕ್ಸಾಸ್‌ನ ಸ್ಟಾರ್‌ಬೇಸ್ ಕೇಂದ್ರದಲ್ಲಿ ಉಡಾವಣಾ ಗೋಪುರಕ್ಕೆ ಅಳವಡಿಸಿರುವ ʼಚಾಪ್‌ಸ್ಟಿಕ್ಸ್ʼ ಎಂಬ ಯಾಂತ್ರಿಕ ತೋಳುಗಳ ಮೂಲಕ ಸ್ಟಾರ್‌ಶಿಪ್ ರಾಕೆಟ್ ಅನ್ನು ಯಶಸ್ವಿಯಾಗಿ ಇಳಿಸಲಾಗಿದೆ. ಈ ಐತಿಹಾಸಿಕ ಸಾಧನೆಯು, ರಾಕೆಟ್‌ಗಳನ್ನು ಸಂಪೂರ್ಣವಾಗಿ ಮರುಬಳಕೆ ಮಾಡಿಕೊಳ್ಳುವ ಪ್ರಯತ್ನದ ಹಾದಿಯಲ್ಲಿ ಮಹತ್ವದ ಹೆಜ್ಜೆಯಾಗಿದೆ.
ಸ್ಪೇಸ್‌ಎಕ್ಸ್ ಸಂಸ್ಥೆಯ ಮಾಲೀಕ ಎಲಾನ್ ಮಸ್ಕ್ ಅವರು ಆ ಸಂದರ್ಭದ ವಿಡಿಯೊವನ್ನು ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್‌ನಲ್ಲಿ ಹಂಚಿಕೊಂಡಿದ್ದಾರೆ.
ಶುಕ್ರವಾರ ನಡೆದ ಮೊದಲ ಹಂತದ ಪರೀಕ್ಷೆ ವೇಳೆ, ನೌಕೆಯ ಬೂಸ್ಟರ್ ಅನ್ನು ಹಿಡಿಯಲು ಸಾಧ್ಯವಾಗಿರಲಿಲ್ಲ. ಹೀಗಾಗಿ, ಅದನ್ನು ಮೆಕ್ಸಿಕೋ ಕೊಲ್ಲಿಯಲ್ಲಿ ಸಮುದ್ರದತ್ತ ತಿರುಗಿಸಿ ಸುರಕ್ಷಿತವಾಗಿ ಬೀಳುವಂತೆ ಮಾಡಲಾಗಿತ್ತು. ಆದರೆ, ಅದು ನೀರಿಗೆ ಬೀಳುವ ಮೊದಲೇ ಸ್ಫೋಟಗೊಂಡಿತ್ತು. ಅದಾದ ನಂತರ ರಾಕೆಟ್‌ನ ಮೇಲ್ಭಾಗವು ಕಕ್ಷೆಯಲ್ಲೇ ಮುಂದುವರಿದು, ಭೂಮಿಯನ್ನು 14 ಬಾರಿ ಸುತ್ತಿ, ಮೆಕಾಜಿಲ್ಲಾ ಎಂದು ಕರೆಯಲಾಗುವ ಸ್ಪೇಸ್‌ಎಕ್ಸ್‌ನ ಉಡಾವಣಾ ಗೋಪುರದ ಮೇಲೆ ಯಶಸ್ವಿಯಾಗಿ ಇಳಿದಿದೆ.