South India's No.1 Digital Mobile Paper
LIVE
Welcome to Smacy Media

ಭಕ್ತರಿಗೆ ಸಿಹಿಸುದ್ದಿ: ಸೀತೆಯ ಜನ್ಮಸ್ಥಳ ಜನಕಪುರಕ್ಕೆ ರಾಮನ ಊರು ಅಯೋಧ್ಯೆಯಿಂದ ರೈಲು ಸಂಪರ್ಕ!

ಭಕ್ತರಿಗೆ ಸಿಹಿಸುದ್ದಿ: ಸೀತೆಯ ಜನ್ಮಸ್ಥಳ ಜನಕಪುರಕ್ಕೆ ರಾಮನ ಊರು ಅಯೋಧ್ಯೆಯಿಂದ ರೈಲು ಸಂಪರ್ಕ!

ನವದೆಹಲಿ: ಭಗವಾನ್ ಶ್ರೀರಾಮನ ಜನ್ಮಸ್ಥಳವಾದ ಉತ್ತರ ಪ್ರದೇಶದ ಅಯೋಧ್ಯೆ ಹಾಗೂ ಸೀತಾಮಾತೆಯ ಜನ್ಮಸ್ಥಳ ಎಂದು ನಂಬಲಾಗಿರುವ ನೇಪಾಲದ ಜನಕಪುರ ಧಾಮದ ನಡುವೆ ಭಾರತೀಯ ರೈಲ್ವೆ ಹೊಸ ವಾರದ ರೈಲು ಸೇವೆಗೆ ಅನುಮೋದನೆ ನೀಡಿದೆ. ಈ ಹೊಸ ಸೇವೆಯಿಂದಾಗಿ ಎರಡೂ ಪವಿತ್ರ ಕ್ಷೇತ್ರಗಳಿಗೆ ಭೇಟಿ ನೀಡುವ ಯಾತ್ರಾರ್ಥಿಗಳ ಪ್ರಯಾಣ ಇನ್ನಷ್ಟು ಸುಲಭವಾಗಲಿದೆ.

ಮಾರ್ಗ ಮತ್ತು ದೂರದ ವಿವರ
ಸುಮಾರು 604 ಕಿ.ಮೀ ದೂರವನ್ನು ಕ್ರಮಿಸಲಿರುವ ಈ ರೈಲು, ಜನಕಪುರ ಧಾಮ ಮತ್ತು ಅಯೋಧ್ಯೆ ಕಂಟೋನ್ಮೆಂಟ್ ನಡುವೆ ಸಂಚರಿಸಲಿದೆ. ಬಿಹಾರ ಮತ್ತು ಉತ್ತರ ಪ್ರದೇಶದ ಹಲವು ನಗರಗಳ ಮೂಲಕ ಹಾದುಹೋಗುವ ಈ ರೈಲು, ರಾಮಾಯಣ ಪರಂಪರೆಯ ಎರಡು ಪ್ರಮುಖ ತಾಣಗಳನ್ನು ಬೆಸೆಯಲಿದೆ ಎಂದು ರೈಲ್ವೆ ಪ್ರಕಟಣೆ ತಿಳಿಸಿದೆ. ಮಾರ್ಗಮಧ್ಯೆ ಜಯನಗರ, ಮಧುಬನಿ, ಶಿಶೌ, ಸೀತಾಮರ್ಹಿ, ರಕ್ಸೌಲ್, ನರ್ಕಟಿಯಾಗಂಜ್, ಗೋರಖ್‌ಪುರ, ಬಸ್ತಿ, ಮಂಕಪುರ ಮತ್ತು ಅಯೋಧ್ಯೆ ಧಾಮ ನಿಲ್ದಾಣಗಳಲ್ಲಿ ಈ ರೈಲು ನಿಲುಗಡೆಯಾಗಲಿದೆ.

ಈ ರೈಲು ವಾರಕ್ಕೆ ಒಂದು ಬಾರಿ ಎರಡೂ ದಿಕ್ಕುಗಳಲ್ಲಿ ಸಂಚರಿಸಲಿದೆ. ಪ್ರತಿ ಶನಿವಾರ ಜನಕಪುರ ಧಾಮದಿಂದ ಹೊರಡಲಿದ್ದು, ಪ್ರತಿ ಸೋಮವಾರ ಅಯೋಧ್ಯೆ ಕಂಟೋನ್ಮೆಂಟ್‌ನಿಂದ ಮರಳಿ ಪ್ರಯಾಣ ಬೆಳೆಸಲಿದೆ. ಬೇರೆ ಸಾರಿಗೆ ವ್ಯವಸ್ಥೆಗಳನ್ನು ಹುಡುಕುವ ತೊಂದರೆಯಿಲ್ಲದೆ ಗಡಿ ದಾಟಿ ಪ್ರಯಾಣಿಸಲು ಇದು ಯಾತ್ರಾರ್ಥಿಗಳು ಮತ್ತು ಪ್ರವಾಸಿಗರಿಗೆ ಅನುಕೂಲ ಮಾಡಿಕೊಡಲಿದೆ. ಇದರೊಂದಿಗೆ ರಾಮಾಯಣ ಪ್ರವಾಸೋದ್ಯಮಕ್ಕೆ ಉತ್ತೇಜನ ಸಿಗಲಿದ್ದು, ಶಿಕ್ಷಣ, ವ್ಯಾಪಾರ ಹಾಗೂ ಕೌಟುಂಬಿಕ ಉದ್ದೇಶಗಳಿಗಾಗಿ ಪ್ರಯಾಣಿಸುವವರಿಗೂ ಹೆಚ್ಚಿನ ಅನುಕೂಲವಾಗಲಿದೆ.

ಟಿಕೆಟ್ ಬುಕಿಂಗ್ ಮಾಹಿತಿ
ಭಾರತೀಯ ರೈಲ್ವೆ ಈ ಸೇವೆಗೆ ಅನುಮೋದನೆ ನೀಡಿದ್ದರೂ, ರೈಲಿನ ವಾಣಿಜ್ಯ ಸಂಚಾರ ಆರಂಭವಾಗುವ ದಿನಾಂಕವನ್ನು ಇನ್ನೂ ಪ್ರಕಟಿಸಿಲ್ಲ. ರೈಲಿನ ಸಂಖ್ಯೆ, ಹೊರಡುವ ಮತ್ತು ತಲುಪುವ ಸಮಯ, ಟಿಕೆಟ್ ದರ ಹಾಗೂ ಬುಕಿಂಗ್ ದಿನಾಂಕಗಳು ಇನ್ನಷ್ಟೇ ಪ್ರಕಟವಾಗಬೇಕಿದೆ. ಬುಕಿಂಗ್ ಆರಂಭವಾದ ನಂತರ ಪ್ರಯಾಣಿಕರು ಐಆರ್‌ಸಿಟಿಸಿ (IRCTC) ವೆಬ್‌ಸೈಟ್ ಅಥವಾ ಐಆರ್‌ಸಿಟಿಸಿ ರೈಲ್ ಕನೆಕ್ಟ್ ಆ್ಯಪ್ ಮೂಲಕ ಸೀಟುಗಳ ಲಭ್ಯತೆಯನ್ನು ಪರಿಶೀಲಿಸಿ ಟಿಕೆಟ್ ಕಾಯ್ದಿರಿಸಬಹುದು. ಈ ಉಪಕ್ರಮದ ಮೂಲಕ ಭಾರತೀಯ ರೈಲ್ವೆಯು ಪ್ರಾದೇಶಿಕ ಪ್ರವಾಸೋದ್ಯಮ, ಆರ್ಥಿಕ ಚಟುವಟಿಕೆ ಹಾಗೂ ಭಾರತ ಮತ್ತು ನೇಪಾಲ ನಡುವಿನ ಸ್ನೇಹ ಸಂಬಂಧವನ್ನು ಮತ್ತಷ್ಟು ಬಲಪಡಿಸುತ್ತಿದೆ ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.

📍 Gulbarga
📰 Udayavani
🕒 7 days ago

Related News

ಸೋನಿಯಾ ಗಾಂಧಿ ಆತ್ಮಕಥೆ ಬಿಡುಗಡೆ ಸಮಾರಂಭಕ್ಕೆ‌ ತಮಿಳುನಾಡು ಮುಖ್ಯಮಂತ್ರಿ ವಿಜಯ್
ಸೋನಿಯಾ ಗಾಂಧಿ ಆತ್ಮಕಥೆ ಬಿಡುಗಡೆ ಸಮಾರಂಭಕ್ಕೆ‌ ತಮಿಳುನಾಡು ಮುಖ್ಯಮಂತ್ರಿ ವಿಜಯ್
ಭಾರತದ ಮುಡಿಗೆ ಏಕದಿನ ಸರಣಿ ಕಿರೀಟ: ಅರ್ಷದೀಪ್, ಸಿರಾಜ್ ‘ಬಿರುಗಾಳಿ’
ಭಾರತದ ಮುಡಿಗೆ ಏಕದಿನ ಸರಣಿ ಕಿರೀಟ: ಅರ್ಷದೀಪ್, ಸಿರಾಜ್ ‘ಬಿರುಗಾಳಿ’
ʼಸರ್ವಾಧಿಕಾರಿʼ ಕಾಂಗ್ರೆಸ್‌ನ ಭಾರತ ಶೃಂಗಸಭೆ ದೇಶ ವಿರೋಧಿ ಸಮಾವೇಶ: ಕೇಂದ್ರ ಸಚಿವ
ʼಸರ್ವಾಧಿಕಾರಿʼ ಕಾಂಗ್ರೆಸ್‌ನ ಭಾರತ ಶೃಂಗಸಭೆ ದೇಶ ವಿರೋಧಿ ಸಮಾವೇಶ: ಕೇಂದ್ರ ಸಚಿವ
⬅ Back
➕ Post Ad
To Ads ➡