South India's No.1 Digital Mobile Paper
LIVE
Welcome to Smacy Media

IPL 2027: ಅರ್ಷ್‌ದೀಪ್ ಸಿಂಗ್ ಮುಂಬೈ ಇಂಡಿಯನ್ಸ್‌ಗೆ ಬರೋದು ಪಕ್ಕಾ:

IPL 2027: ಅರ್ಷ್‌ದೀಪ್ ಸಿಂಗ್ ಮುಂಬೈ ಇಂಡಿಯನ್ಸ್‌ಗೆ ಬರೋದು ಪಕ್ಕಾ:

ಹ್ಯಾಮಿಲ್ಟನ್ (ನ್ಯೂಜಿಲೆಂಡ್): ಭಾರತೀಯ ಕ್ರಿಕೆಟ್ ತಂಡದ ಯುವ ವೇಗಿ ಅರ್ಷ್‌ದೀಪ್ ಸಿಂಗ್ (Arshdeep Singh) ಮುಂಬೈ ಇಂಡಿಯನ್ಸ್ (MI) ತಂಡಕ್ಕೆ ಟ್ರೇಡ್ ಆಗುವುದು ಬಹುತೇಕ ಖಚಿತವಾಗಿದೆ.

ಅರ್ಷ್‌ದೀಪ್ ಅವರ ತಂದೆಯೇ ಈ ಒಪ್ಪಂದವನ್ನು ಸ್ಪಷ್ಟಪಡಿಸಿದ್ದು, ಪಂಜಾಬ್ ಕಿಂಗ್ಸ್‌ (Punjab Kings) ತೊರೆಯುತ್ತಿರುವುದಕ್ಕೆ ಸಣ್ಣ ಪ್ರಮಾಣದ ಬೇಸರ ಇದ್ರೂ, ಮುಂಬೈ ಇಂಡಿಯನ್ಸ್‌ಗೆ ಸೇರ್ಪಡೆಯಾಗುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ.

ನ್ಯೂಜಿಲೆಂಡ್‌ನ ಹ್ಯಾಮಿಲ್ಟನ್‌ನಲ್ಲಿ ಪ್ರಸ್ತುತ ಭಾರತ ಏಕದಿನ ತಂಡದ ಭಾಗವಾಗಿರುವ ಅರ್ಷ್‌ದೀಪ್ ಅವರ ತಂದೆ, ಹಿರಿಯ ಕ್ರೀಡಾ ಪತ್ರಕರ್ತ ವಿಮಲ್ ಕುಮಾರ್ ಅವರೊಂದಿಗೆ ಮಾತನಾಡಿ ಈ ವಿಷಯವನ್ನು ಹಂಚಿಕೊಂಡಿದ್ದಾರೆ.

"ಹೌದು, ಟ್ರೇಡಿಂಗ್ ಪ್ರಕ್ರಿಯೆ ಮುಗಿದಿದೆ. ನಾವು ಮುಂಬೈ ಇಂಡಿಯನ್ಸ್ ತಂಡಕ್ಕೆ ಸೇರ್ಪಡೆಯಾಗುತ್ತಿರುವುದಕ್ಕೆ ಸಂತೋಷವಾಗಿದ್ದೇವೆ," ಎಂದು ಅವರು ಹೇಳಿದರು.

"ಈ ವಿಚಾರ ನಮಗೂ ದಿಢೀರನೆ ತಿಳಿಯಿತು. ಸ್ವಂತ ರಾಜ್ಯದ (ತವರು) ಫ್ರಾಂಚೈಸಿಯಿಂದ ಹೊರಗೆ ಹೋಗುತ್ತಿದ್ದಾರೆ ಎಂಬ ಸಣ್ಣ ಬೇಸರ ಮನಸ್ಸಿನಲ್ಲಿದೆ. ಆದರೆ, ಪ್ರತಿಯೊಂದು ಫ್ರಾಂಚೈಸಿಯೂ ತಂಡದಲ್ಲಿ ಸಮತೋಲನ ಕಾಯ್ದುಕೊಳ್ಳಲು ಬಯಸುತ್ತದೆ. ಹೀಗಾಗಿ ಈ ಟ್ರೇಡ್ ನಡೆದಿದೆ. ಮುಂಬೈ ಇಂಡಿಯನ್ಸ್ ಜೊತೆ ಸಾಗಲು ನಮಗೆ ಖುಷಿಯಿದೆ," ಎಂದು ಅವರು ತಿಳಿಸಿದರು.

ಅರ್ಷ್‌ದೀಪ್ ಸಿಂಗ್ ಮತ್ತು ಹಾರ್ದಿಕ್ ಪಾಂಡ್ಯ ನಡುವಿನ ಟ್ರೇಡಿಂಗ್ ಒಪ್ಪಂದಕ್ಕಾಗಿ ಮುಂಬೈ ಇಂಡಿಯನ್ಸ್ ಹಾಗೂ ಪಂಜಾಬ್ ಕಿಂಗ್ಸ್ ಫ್ರಾಂಚೈಸಿಗಳು ಕಳೆದ ಕೆಲವು ಸಮಯದಿಂದ ಸಮಾಲೋಚನೆ ನಡೆಸುತ್ತಿದ್ದವು. ಆರಂಭಿಕ ಒಪ್ಪಂದದ ಕೆಲಸಗಳು ಪೂರ್ಣಗೊಂಡಿದ್ದು, ಬಿಸಿಸಿಐ (BCCI) ಹಾಗೂ ಐಪಿಎಲ್ ಆಡಳಿತ ಮಂಡಳಿಯಿಂದ ಔಪಚಾರಿಕ ಅನುಮೋದನೆ ದೊರೆತ ಬಳಿಕ ಅಧಿಕೃತ ಘೋಷಣೆ ಹೊರಬೀಳಲಿದೆ.

ಅರ್ಷ್‌ದೀಪ್ ಮುಂಬೈಗೆ, ಹಾರ್ದಿಕ್ ಪಂಜಾಬ್‌ಗೆ

ಈ ಪ್ರಸ್ತಾವಿತ ಟ್ರೇಡಿಂಗ್ ಎರಡೂ ಫ್ರಾಂಚೈಸಿಗಳ ಅಗತ್ಯತೆಗಳನ್ನು ಪೂರೈಸಲಿದೆ. ಜಸ್ಪ್ರೀತ್ ಬುಮ್ರಾಗೆ ಬೆಂಬಲವಾಗಿ ಪ್ರಮುಖ ಭಾರತೀಯ ವೇಗಿಯನ್ನು ಹೊಂದಲು ಮುಂಬೈ ಇಂಡಿಯನ್ಸ್ ಬಯಸಿದರೆ, ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ನೆರವಾಗಬಲ್ಲ ಅನುಭವೀ ಆಲ್‌ರೌಂಡರ್ ಪಡೆಯಲು ಪಂಜಾಬ್ ಕಿಂಗ್ಸ್ ಮುಂದಾಗಿದೆ.

2019ರಲ್ಲಿ ಐಪಿಎಲ್‌ಗೆ ಪಾದಾರ್ಪಣೆ ಮಾಡಿದ ಅರ್ಶ್‌ದೀಪ್, ಇದುವರೆಗೆ 36 ಪಂದ್ಯಗಳಿಂದ 111 ವಿಕೆಟ್‌ಗಳನ್ನು ಪಡೆದು ಪಂಜಾಬ್ ತಂಡದ ಪ್ರಮುಖ ಎಡಗೈ ವೇಗಿಯಾಗಿ ಗುರುತಿಸಿಕೊಂಡಿದ್ದಾರೆ. ಹೊಸ ಚೆಂಡಿನಲ್ಲಿ ಸ್ವಿಂಗ್ ಮಾಡುವ ಹಾಗೂ ಡೆತ್ ಓವರ್‌ಗಳಲ್ಲಿ ನಿಖರ ಯಾರ್ಕರ್ ಎಸೆಯುವ ಅವರ ಸಾಮರ್ಥ್ಯ ಮುಂಬೈ ತಂಡಕ್ಕೆ ಹೊಸ ಬಲ ನೀಡಲಿದೆ.

ಹಾರ್ದಿಕ್ ಪಾಂಡ್ಯ ಅವರ ಸೇರ್ಪಡೆಯು ಪಂಜಾಬ್ ಕಿಂಗ್ಸ್‌ನ ಮಧ್ಯಮ ಕ್ರಮಾಂಕಕ್ಕೆ ಶಕ್ತಿ ತುಂಬಲಿದ್ದು, ನಾಯಕ ಶ್ರೇಯಸ್ ಅಯ್ಯರ್‌ಗೆ ಹೆಚ್ಚುವರಿ ವೇಗದ ಬೌಲಿಂಗ್ ಆಯ್ಕೆಯನ್ನು ಒದಗಿಸಲಿದೆ. ಹಾರ್ದಿಕ್ ಪಂಜಾಬ್ ತಂಡಕ್ಕೆ ಆಟಗಾರನಾಗಿ ಮಾತ್ರ ಸೇರ್ಪಡೆಯಾಗಲಿದ್ದು, ಶ್ರೇಯಸ್ ಅಯ್ಯರ್ ಅವರೇ ನಾಯಕರಾಗಿ ಮುಂದುವರಿಯಲಿದ್ದಾರೆ.

ಡಿಸೆಂಬರ್ 16 ರಂದು ಮಿನಿ ಹರಾಜು

ಐಪಿಎಲ್ 2027ರ ಮಿನಿ ಹರಾಜು ಡಿಸೆಂಬರ್ 16 ರಂದು ಗೋವಾದಲ್ಲಿ ನಡೆಯಲಿದೆ. ಫ್ರಾಂಚೈಸಿಗಳು ತಮ್ಮ ಉಳಿಸಿಕೊಂಡ (Retained) ಮತ್ತು ಬಿಡುಗಡೆ ಮಾಡಿದ (Released) ಆಟಗಾರರ ಪಟ್ಟಿಯನ್ನು ಸಲ್ಲಿಸಲು ಬಿಸಿಸಿಐ ನವೆಂಬರ್ 17ರವರೆಗೆ ಕಾಲಾವಕಾಶ ನೀಡಿದೆ. ಪೂರ್ವ-ಹರಾಜು ಟ್ರೇಡಿಂಗ್ ಗಡುವು ಡಿಸೆಂಬರ್ 9ರವರೆಗೆ ತೆರೆದಿರಲಿದೆ.

📍 Chennai
📰 Udayavani
🕒 13 days ago

Related News

ಸೋನಿಯಾ ಗಾಂಧಿ ಆತ್ಮಕಥೆ ಬಿಡುಗಡೆ ಸಮಾರಂಭಕ್ಕೆ‌ ತಮಿಳುನಾಡು ಮುಖ್ಯಮಂತ್ರಿ ವಿಜಯ್
ಸೋನಿಯಾ ಗಾಂಧಿ ಆತ್ಮಕಥೆ ಬಿಡುಗಡೆ ಸಮಾರಂಭಕ್ಕೆ‌ ತಮಿಳುನಾಡು ಮುಖ್ಯಮಂತ್ರಿ ವಿಜಯ್
ಭಾರತದ ಮುಡಿಗೆ ಏಕದಿನ ಸರಣಿ ಕಿರೀಟ: ಅರ್ಷದೀಪ್, ಸಿರಾಜ್ ‘ಬಿರುಗಾಳಿ’
ಭಾರತದ ಮುಡಿಗೆ ಏಕದಿನ ಸರಣಿ ಕಿರೀಟ: ಅರ್ಷದೀಪ್, ಸಿರಾಜ್ ‘ಬಿರುಗಾಳಿ’
ʼಸರ್ವಾಧಿಕಾರಿʼ ಕಾಂಗ್ರೆಸ್‌ನ ಭಾರತ ಶೃಂಗಸಭೆ ದೇಶ ವಿರೋಧಿ ಸಮಾವೇಶ: ಕೇಂದ್ರ ಸಚಿವ
ʼಸರ್ವಾಧಿಕಾರಿʼ ಕಾಂಗ್ರೆಸ್‌ನ ಭಾರತ ಶೃಂಗಸಭೆ ದೇಶ ವಿರೋಧಿ ಸಮಾವೇಶ: ಕೇಂದ್ರ ಸಚಿವ
⬅ Back
➕ Post Ad
To Ads ➡