ಜೈಸ್ವಾಲ್, ರಾಥೋಡ್ ಶತಕ..: ಎರಡನೇ ಅನಧಿಕೃತ ಟೆಸ್ಟ್ ಡ್ರಾನಲ್ಲಿ ಅಂತ್ಯ
ಕ್ರೈಸ್ಟ್‌ಚರ್ಚ್: ಯಶಸ್ವಿ ಜೈಸ್ವಾಲ್ ಮತ್ತು ಯಶ್ ರಾಥೋಡ್ ಅವರ ಭರ್ಜರಿ ಶತಕಗಳ ನೆರವಿನಿಂದ ಭಾರತ ಎ ತಂಡವು ನ್ಯೂಜಿಲ್ಯಾಂಡ್ ಎ ತಂಡದ ವಿರುದ್ದ ಎರಡನೇ ಅನಧಿಕೃತ ಟೆಸ್ಟ್ ಪಂದ್ಯವನ್ನು ಡ್ರಾ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದೆ.
ಪಂದ್ಯದ ಅಂತಿಮ ದಿನದಂದು, ಯಶಸ್ವಿ ಜೈಸ್ವಾಲ್ ಅಜೇಯ 155 ರನ್ ಮತ್ತು ಯಶ್ ರಾಥೋಡ್ ಅಜೇಯ 100 ರನ್ ಗಳಿಸುವ ಮೂಲಕ ಭಾರತ 'ಎ' ತಂಡವು ಪಂದ್ಯವನ್ನು ಡ್ರಾನಲ್ಲಿ ಅಂತ್ಯಗೊಳಿಸಿತು.
ಭಾರತ 'ಎ' ತಂಡವು 35 ರನ್‌ಗಳಿಗೆ 2 ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟದಲ್ಲಿದ್ದಾಗ, ಈ ಜೋಡಿ ಮೂರನೇ ವಿಕೆಟ್‌ಗೆ ಮುರಿಯದ 247 ರನ್‌ಗಳ ಜೊತೆಯಾಟವನ್ನು ನೀಡಿತು. ರಾಥೋಡ್ ತಮ್ಮ 11ನೇ ಪ್ರಥಮ ದರ್ಜೆ ಶತಕವನ್ನು ಪೂರೈಸಿದ ನಂತರ, ಉಭಯ ತಂಡಗಳು ಪಂದ್ಯವನ್ನು ಕೊನೆಗೊಳಿಸಲು ಒಪ್ಪಿಕೊಂಡವು.
ಸಾಯಿ ಸುದರ್ಶನ್ 11 ರನ್ ಮಾಡಿದರೆ, ದೇವದತ್ತ ಪಡಿಕ್ಕಲ್ ಮೊದಲ ಎಸೆತದಲ್ಲೇ ಔಟಾಗಿ ಮರಳಿದರು.
ಭಾರತ ಮೊದಲ ಇನ್ನಿಂಗ್ಸ್ ನಲ್ಲಿ 346 ರನ್ ಮಾಡಿದ್ದರೆ, ನ್ಯೂಜಿಲ್ಯಾಂಡ್ ಮೊದಲ ಇನ್ನಿಂಗ್ಸ್‌ನಲ್ಲಿ 424 ರನ್ ಮಾಡಿತ್ತು.