ರಾಜ್ಯದಲ್ಲಿ ಮೇಜರ್ ಸರ್ಜರಿಗೆ ಮುಂದಾದ ‘ಕೈ’ ಕಮಾಂಡ್: ಜಾತಿ ಸಮೀಕರಣದ ಆಧಾರದಲ್ಲಿ ತಂತ್ರ
ರಾಜ್ಯದಲ್ಲಿ ನಾಯಕತ್ವ ಬದಲಾವಣೆಗೆ ತೀಮಾರ್ನದ ಬೆನ್ನಲ್ಲೇ ಕಾಂಗ್ರೆಸ್ ಹೈಕಮಾಂಡ್ ಹೈವೋಲ್ಟೇಜ್ ತಂತ್ರ ರೂಪಿಸಿದೆ. ಜಾತಿ ಸಮೀಕರಣದ ಆಧಾರದ ಮೇಲೆ ನಾಲ್ವರಿಗೆ ಡಿಸಿಎಂ ಸ್ಥಾನ ಹಾಗೂ ಕೆಪಿಸಿಸಿಗೆ ಹೊಸ ಸಾರಥಿ ನೇಮಿಸಲು 'ಕೈ' ವರಿಷ್ಠರು ಮುಂದಾಗಿದ್ದಾರೆ. ಸಿಎಂ ಬದಲಾವಣೆಯ ನಂತರವೂ ತನ್ನ ವೋಟ್ ಬ್ಯಾಂಕ್ ಕೈತಪ್ಪಿ ಹೋಗಬಾರದು ಎಂಬ ನಿಟ್ಟಿನಲ್ಲಿ ವರಿಷ್ಠರು ಪ್ಲ್ಯಾನ್ ಮಾಡಿದ್ದಾರೆ ಎನ್ನಲಾಗಿದೆ.
ಬೆಂಗಳೂರು, ಮೇ 27: ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ (Siddaramaiah) ಅವರಿಂದ ರಾಜೀನಾಮೆ ಪಡೆದು ನೂತನ ಮುಖ್ಯಮಂತ್ರಿಯ ಆಯ್ಕೆಯ ಬಳಿಕವೂ ವೋಟ್ ಬ್ಯಾಂಕ್ ಕಳೆದುಕೊಳ್ಳದಿರುವಂತೆ ನೋಡಿಕೊಳ್ಳುವ ನಿಟ್ಟಿನಲ್ಲಿ ಕಾಂಗ್ರೆಸ್ ವರಿಷ್ಠರು ಹತ್ತು ಹಲವು ತಂತ್ರಗಳನ್ನು ಹೆಣೆದಿದ್ದಾರೆ. ಜಾತಿ ಸಮೀಕರಣ ಆಧರಿಸಿ ಲೆಕ್ಕಾಚಾರ ಹಾಕಲಾಗಿದ್ದು, ಕೇವಲ ಮುಖ್ಯಮಂತ್ರಿ ಬದಲಾವಣೆ ಮಾತ್ರವಲ್ಲದೆ ಸರ್ಕಾರ ಮತ್ತು ಪಕ್ಷಕ್ಕೆ ಸಂಬಂಧಿಸಿ ಕೆಲ ಮಹತ್ವದ ನಿರ್ಣಯ ಕೈಗೊಂಡಿದ್ದಾರೆ. ಸಿಎಂ ಬದಲಾವಣೆಯಿಂದ ಯಾವುದೇ ಸಮುದಾಯಗಳಿಗೂ ನೋವಾಗಂತೆ ನೋಡಿಕೊಳ್ಳುವ ಬಗ್ಗೆಯೂ ಹೈಕಮಾಂಡ್ ಪ್ಲ್ಯಾನ್ ರೂಪಿಸಿರುವ ಮಾಹಿತಿ ಸಿಕ್ಕಿದೆ.
ನೂತನ ಮುಖ್ಯಮಂತ್ರಿಯ ಆಯ್ಕೆ ಜೊತೆಗೆ ನಾಲ್ವರಿಗೆ ಡಿಸಿಎಂ ಸ್ಥಾನ ನೀಡುವ ಬಗ್ಗೆ ಹೈಕಮಾಂಡ್ನಲ್ಲಿ ಚರ್ಚೆ ನಡೆದಿದೆ. ಜಾತಿ ಸಮೀಕರಣ ಆಧರಿಸಿ ನಾಲ್ವರಿಗೆ ಪ್ರಾತಿನಿಧ್ಯ ನೀಡುವ ಮಾತುಗಳು ಕೇಳಿಬಂದಿವೆ. ಒಬಿಸಿ, ದಲಿತ, ಮುಸ್ಲಿಂ ಅಥವಾ ಅಲ್ಪಸಂಖ್ಯಾತ ಮತ್ತು ಲಿಂಗಾಯತ ಕೋಟಾದಡಿಯಲ್ಲಿ ನಾಲ್ವರನ್ನು ಉಪಮುಖ್ಯಮಂತ್ರಿ ಮಾಡುವ ಬಗ್ಗೆ ವರಿಷ್ಠರು ಒಲವು ತೋರಿದ್ದಾರಂತೆ.